ಪಾಣೆಮಂಗಳೂರು: ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ
ಬಂಟ್ವಾಳ: ಪಾಣೆಮಂಗಳೂರು ಹಳೆಯ ನೇತ್ರಾವತಿ ಸೇತುವೆ ಮೇಲೆ ಆಟೊ ರಿಕ್ಷಾ ನಿಲ್ಲಿಸಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಚಾಲಕ, ಮಾರ್ನಬೈಲು ನಿವಾಸಿ ಪೀಟರ್ ಲೋಬೊ (60) ಅವರ ಮೃತದೇಹ ಗುರುವಾರ ತಲಪಾಡಿ ಡ್ಯಾಂ ಬಳಿ ಪತ್ತೆಯಾಗಿದೆ.
ಅ.29ರಂದು ಮುಂಜಾನೆ ಮನೆಯಿಂದ ಹೊರಟ ಇವರು ತನ್ನ ಆಟೊ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಸೇತುವೆಯ ಮೇಲೆ ಆಟೊ ರಿಕ್ಷಾ ನೋಡಿದ ಸ್ಥಳೀಯರು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾ ಗಮಿಸಿದ್ದು, ಸ್ಥಳೀಯ ಈಜುಪಟುಗಳೂ ಹುಡುಕಾಟ ನಡೆಸಿದ್ದರು.
ಅ.30ರಂದು ತಲಪಾಡಿ ಡ್ಯಾಂ ಬಳಿ ಮರಕ್ಕೆ ಸಿಲುಕಿದ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಇದು ನಾಪತ್ತೆಯಾದ ಪೀಟರ್ ಲೋಬೊ ಅವರದ್ದೇ ಎಂದು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.
ಮೃತ ಪೀಟರ್ ಲೋಬೊ ಕಾಯಿಲೆಯಿಂದ ಬಳಲುತ್ತಿದ್ದು, ತಾನು ಯಾರಿಗೂ ಅವಲಂಬಿತನಾಗಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಅವರ ಪತ್ನಿ ಅನಿತಾ ಲೋಬೊ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



