ನಾನು ಲವ್ ಜಿಹಾದ್ ಮಾಡಿಲ್ಲ, ನಮ್ಮನ್ನು ಬದುಕಲು ಬಿಡಿ: ಯೂಟ್ಯೂಬರ್ ಮುಕಳೆಪ್ಪ
ನಾವಿಬ್ಬರು ಇಷ್ಟಪಟ್ಟು ಮದುವೆಯಾಗಿದ್ದೇವೆ, ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ನಮ್ಮನ್ನು ಬದುಕಲು ಬಿಡಿ ಎಂದು ಯೂಟ್ಯೂಬರ್ ಮುಕಳೆಪ್ಪ ಹೇಳಿದ್ದಾರೆ.

ಯುವತಿ ಜೊತೆ ಮದುವೆ ಪ್ರಕರಣ ಆರೋಪ ಸಂಬಂಧ ಮೊದಲ ಬಾರಿಗೆ ತನ್ನ ಹೇಳಿಕೆ ಬಿಡುಗಡೆ ಮಾಡಿದ ಧಾರವಾಡದ ಯೂಟ್ಯೂಬರ್ ಮುಕಳೆಪ್ಪ, ನನ್ನ ಪತ್ನಿ ಮತಾಂತರ ಆಗಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಾಳೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವು ಇಬ್ಬರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ, ಅದೇ ಧರ್ಮ ಪಾಲಿಸುತ್ತೇನೆ. ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸುತ್ತೇನೆ. ಯಾವುದೇ ಮತಾಂತರ ಮಾಡಲ್ಲ. ಕಲಾವಿದರಲ್ಲಿ ಯಾವುದೇ ಜಾತಿ-ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂದರೆ ನಾನು ಕೂಡ ಕನ್ನಡ ಹಿಂದೂನೇ. ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡಿ, ನಮ್ಮನ್ನ ಬದುಕಲು ಬಿಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.
ಮುಕಳೆಪ್ಪ ಪತ್ನಿ ಕೂಡ ಮಾತನಾಡಿ, ನಾವಿಬ್ಬರೂ ಒಪ್ಪಿ ಮದುವೆಯಾಗಿದ್ದೇವೆ. ಯಾರು ಕೂಡ ಮೈಂಡ್ ವಾಶ್ ಮಾಡಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸ್ವತಃ ನಾವೇ ಗಂಡ ಹೆಂಡತಿ ಕುಳಿತು ಹೇಳುತಿದ್ದೇವೆ. ಮೂರು ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ. ನಾನು ಯಾವತ್ತೂ ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ನನ್ನನ್ನು ಮಾತಾಂತರ ಮಾಡಿದ್ದಾರೆ ಎನ್ನುವುದೆಲ್ಲ ಸುಳ್ಳು. ಇದನ್ನ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದೀರೋ ಅದೇ ರೀತಿ ನೋಡಿ. ಕೈಮುಗಿದು ಕೇಳ್ತೇನೆ. ನಮ್ಮನ್ನ ಬದುಕಲು ಬಿಡಿ ಎಂದ ಹೇಳಿದ್ದಾರೆ.