ಕರಾವಳಿ

ಅರುಣ್ ಪುತ್ತಿಲ ಹೇಳಿಕೆಯಿಂದ ನೋವಾಗಿದೆ: ಅಶೋಕ್ ರೈ

ಪುತ್ತೂರು: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ  ಅರುಣ್ ಕುಮಾರ್ ಪುತ್ತಿಲ ನನ್ನ‌ ಬಗ್ಗೆ ನೀಡಿರುವ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಸಂತ್ರಸ್ತೆಯ ಮನೆಗೆ ಜು.5ರಂದು ಭೇಟಿ ನೀಡಿದ ಅವರು, ಪಕ್ಷ ಬೇಧ ಮಾಡದೆ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎನ್ನುವ ದೃಷ್ಟಿಯಿಂದ ಎರಡೂ ಕುಟುಂಬದ ಇಬ್ಬರಿಗೂ ಮದುವೆ ಮಾಡಿಸಲು ಹೇಳಿದ್ದೆ. ನಾನು ಇದರಲ್ಲಿ ಪ್ರಚಾರ ತೆಗೆದುಕೊಳ್ಳಲು ನೋಡಿಲ್ಲ, ಅದರ ಅವಶ್ಯಕತೆ ನನಗಿಲ್ಲ, ಇದು ಇಬ್ಬರನ್ನು ಮದುವೆ ಮಾಡಿಸುವ ವಿಷಯ, ಇದರಲ್ಲಿ ದೂರ ನಿಂತು ಹೇಳಿಕೆ ಕೊಡುವುದು ಸುಲಭ ಎಂದರು.

ಮಧ್ಯಸ್ಥಿಕೆ ವಹಿಸಿದ್ದ ಶಾಸಕ ಅಶೋಕ್ ರೈ ಇಬ್ಬರಿಗೆ ಮದುವೆ ಮಾಡಿಸಿ ಪ್ರಕರಣ ಇತ್ಯರ್ಥ ಪಡಿಸಬೇಕಿತ್ತು ಎಂದು ಪುತ್ತಿಲ ಹೇಳಿದ್ದಾರೆ. ಎರಡೂ ಕುಟುಂಬದವರು ನನ್ನನ್ನು ಸಂಪರ್ಕಿಸಿದ ಸಂದರ್ಭದಲ್ಲಿ ನಾನು ಆ ಪ್ರಯತ್ನ ಮಾಡಿದ್ದೆ. ಆರೋಪಿ ಸ್ಥಾನದಲ್ಲಿರುವ ಯುವಕ ಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡಿದವನು. ಇದನ್ನು ರಾಜಕೀಯ ದೃಷ್ಟಿಯಿಂದ ನೋಡುವುದಿದ್ದರೆ ಬೇರೆ ದಿಕ್ಕಿನತ್ತ ಹೋಗುತಿತ್ತು. ನಾನು ಆ ತರಹ ಯೋಚಿಸಿಲ್ಲ ಎಂದರು. ನನ್ನ ಬಗ್ಗೆ ಹೇಳುವ ಬಿಜೆಪಿಯವರು ಆರೋಪಿಯ ತಂದೆಯನ್ನು ಪಕ್ಷದಿಂದ ಉಚ್ಚಾಟಿಸಿದ್ದಾರಾ ಎಂದು ಪ್ರಶ್ನಿಸಿದ ಶಾಸಕರು ಪಕ್ಷದಿಂದ ಉಚ್ಚಾಟಿಸಿ ಎಂದು ನಾನು ಹೇಳುತ್ತಿಲ್ಲ, ವಿಷಯವನ್ನು ರಾಜಕೀಯವಾಗಿ ಬಳಸಬಾರದು ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!