ಕೊನೆಗೂ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್-ಇಸ್ರೇಲ್
ಟೆಹರಾನ್ : ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ನೀಡಿದ್ದಾರೆ. ಇರಾನ್ ಟಿವಿ ಕೂಡ ಕದನ ವಿರಾಮ ಆರಂಭವಾಗಿದೆ ಎಂದು ವರದಿ ಮಾಡಿದೆ.

ಸೋಮವಾರ ರಾತ್ರಿ ಖತರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಮಧ್ಯಪ್ರಾಚ್ಯದಲ್ಲಿನ 12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತು ಇರಾನ್ ಮಂಗಳವಾರ ಒಪ್ಪಿಕೊಂಡಿವೆ ಎಂದು ವರದಿಯಾಗಿದೆ.
ಮಂಗಳವಾರ ಮುಂಜಾನೆ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಇಸ್ರೇಲ್ ಕೂಡ ಬೆಳಗಿನ ಜಾವ ಇರಾನ್‌ನಾದ್ಯಂತ ವೈಮಾನಿಕ ದಾಳಿಯನ್ನು ನಡೆಸಿದೆ. ಆ ಬಳಿಕ ಎರಡೂ ಕಡೆಯವರು ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡರು ಎಂದು ವರದಿಯಾಗಿದೆ.