ಗಲ್ಫ್ ಯೂತ್ಸ್ ಕಬಕ ಜಮಾಅತ್ ದಶಮಾನೋತ್ಸವ-ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ನಿರ್ಧಿಷ್ಟ ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು -ಝೀವಲ್ ಖಾನ್
ಪುತ್ತೂರು: ಗಲ್ಫ್ ಯೂತ್ಸ್ ಕಬಕ ಜಮಾಆತ್ ಇದರ ದಶಮಾನೋತ್ಸವ ಪ್ರಯುಕ್ತ ವಿದ್ಯಾರ್ಥಿ ಸಂಗಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಬಕ ಮಸ್ಜಿದ್ ಸಭಾಂಗಣದಲ್ಲಿ ನಡೆಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ 85% ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು 5, 7 ನೇ ತರಗತಿ ಮದರಸ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಫಾತಿಮಾ ಫಾರಿಝ, ಮರ್ಯಮ್ ರಿಫಾ, ಫಾತಿಮತ್ ಜುಹ್ರಾ, ಫರಾಹತ್ ಬಾನು, ಮಸೂಮ್ ಮೊಹಮ್ಮದ್, ಅಯ್ಶತ್ ಶಝ, ಮೊಹಮ್ಮದ್ ಮಿದ್ಲಜ್, ಫಲಕ್ನಾಝ್, ಮೊಹಮ್ಮದ್ ಅಯ್ಮನ್ ಮತ್ತು ಪಿಯುಸಿ ವಿಭಾಗದಲ್ಲಿ ಫಾತಿಮತ್ ಸಯೀದಾರವರು ಸ್ಮರಣಿಕೆ ಮತ್ತು ನಗದು ಬಹುಮಾನ ಪಡೆದರೆ, ಕಬಕ ಜಮಾಅತ್ ಮದರಸ ವಿಭಾಗದಲ್ಲಿ ೫ನೇ ತರಗತಿಯ ಪಿ ರಿಧಾ, ಫಾತಿಮಾ, ಫಾತಿಮತ್ ಫಹೀಮ ಮತ್ತು 7ನೇ ತರಗತಿಯ ರಿಷಾ ಫಾತಿಮಾ, ಮನ್ಹಾ ನಫೀಸಾ ಮತ್ತು ಮೊಹಮ್ಮದ್ ಜಲಾಲುದ್ದೀನ್ ಸನ್ಮಾನಿಸಲ್ಪಟ್ಟರು.
ಕಬಕ ಖತೀಬ್ ಶಾದುಲಿ ಬಾಖವಿ ದುವಾಶೀರ್ವಚನ ನೀಡಿ ಮಾತನಾಡಿ ವಿದ್ಯಾಭ್ಯಾಸದೊಂದಿಂಗೆ ವಿದ್ಯಾರ್ಥಿಗಳು ಒಳ್ಳೆಯ ಸನ್ನಡತೆಯನ್ನು ಮೈಗೂಡಿಸಿಗೊಳ್ಳಬೇಕು, ಲೌಕಿಕ ವಿದ್ಯಾಭ್ಯಾಸದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸ ಕೂಡ ಬಹಳ ಪ್ರಾಮುಖ್ಯವಾಗಿದೆ, ಇದರಿಂದ ಒಳ್ಳೆಯ ಶಿಸ್ತನ್ನು ಮೈಗೂಡಿಸಿ ಬೆಳೆಯಬಹುದು ಎಂದು ಹೇಳಿದರು.
ಗಲ್ಫ್ ಯೂತ್ಸ್ ನೂತನ ಅಧ್ಯಕ್ಷ ಶರೀಫ್ ಅಹ್ಮದ್ ಕತಾರ್ ಮಾತಾನಾಡಿ, ಗಲ್ಫ್ ಯೂತ್ಸ್ ಬಡ ನಿರ್ಗತಿಕರ ಪರ ಎಂಬ ಪೋಸ್ಟರ್ನೊಂದಿಗೆ ಆರಂಭಗೊಂಡು ಇಂದು ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೇರಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ವಿದ್ಯಾರ್ಥಿಗಳ ಕಲಿಕಾ ಜೀವನದಲ್ಲಿ ಶಿಸ್ತು ಮುಖ್ಯವಾಗಿದ್ದು ಜೀವನದಲ್ಲಿ ಪರಿಪೂರ್ಣತೆಗಿಂತ ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಶಸ್ಥ್ಯ ನೀಡಬೇಕು, ವಿದ್ಯಾರ್ಥಿಗಳ ಏಳಿಗೆಯೇ ನಮ್ಮ ಗುರಿಯಾಗಿದ್ದು ವಿದ್ಯಾಭ್ಯಾಸ ಬಡತನ ನಿರ್ಮೂಲನೆಗೆ ಒಂದು ದಾರಿಯಾಗಿದೆ ಎಂದರು.
ಕಾರ್ಯಕ್ರಮದ ಪ್ರೇರಣ ಭಾಷಣಗಾರರಾಗಿದ್ದ ಕರ್ನಾಟಕ ಸ್ಟೇಟ್ ಆಡಿಟ್ ಅಂಡ್ ಅಕೌಂಟ್ಸ್ ಡಿಪಾರ್ಟ್ಮೆಂಟ್ನ ಹಿರಿಯ ಉಪನಿರ್ದೇಶಕರಾದ ಝೀವಲ್ ಖಾನ್ ಐ ಮಾತನಾಡಿ ನಮ್ಮ ವಿದ್ಯಾರ್ಥಿ ಸಮುದಾಯ ಕ್ಷಣಿಕ ಸುಖಕ್ಕೋಸ್ಕರ ಯಾವುದೇ ಕೆಟ್ಟ ಚಟಕ್ಕೆ ಬಲಿ ಬೀಳದೆ ಉತ್ತಮ ದಾರಿಯಲ್ಲಿ ಬೆಳೆಯಬೇಕು. ಹೆತ್ತವರು ಮಕ್ಕಳ ಆಸಕ್ತಿ ನೋಡಿ ಗುರಿ ನಿರ್ಧರಿಸಿ, ಪ್ರತಿಯೋಬ್ಬರೂ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಂಡು ಬೆಳೆಯಬೇಕು. ಇಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ ಎಂದರು. 5 ಸಾವಿರ ರೂಪಾಯಿಗೆ ಉದ್ಯೋಗ ಆರಂಭಿಸಿದ ನಾನು ಇಂದು ಐಎಎಸ್ ಸಮಾನದ ಹುದ್ದೆಯಲ್ಲಿದ್ದೇನೆ. ನಾನು ಯಾವತ್ತೂ 70% ಗಿಂತ ಹೆಚ್ಚು ಅಥವಾ 60% ಗಿಂತ ಕಡಿಮೆಯೂ ಅಂಕ ಪಡೆದವನಲ್ಲ, ಜೀವನದಲ್ಲಿ ಗುರಿಯನ್ನು ನಿರ್ಧರಿಸಿ ನಡೆಯಬೇಕು, ಸಮುದಾಯದ ವಿದ್ಯಾರ್ಥಿಗಳು ಡಾಕ್ಟರ್ಸ್, ಎಂಜಿನಿಯರ್ಸ್ ಪದವಿ ಕೂಡ ಪಡೆಯಲು ಪ್ರಯತ್ನಿಸಬೇಕು. ಇವತ್ತು ಜಗತ್ತಿನ ದೊಡ್ಡ ವಜ್ರದ ವ್ಯಾಪಾರಿಯೋರ್ವ ಮುಫ್ತಿ ಆಗಿದ್ದಾರೆ. ಅದರಿಂದ ನಮ್ಮ ಗುರಿಯನ್ನು ನಾವು ನಿರ್ಧರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜಿನ ಹತ್ತು ವಿದ್ಯಾರ್ಥಿ ಹಾಗೂ ಹತ್ತು ವಿದ್ಯಾರ್ಥಿನಿಯರಿಗೆ ಸ್ಥಳದಲ್ಲೇ ಚೀಟಿ ಎತ್ತುವ ಮೂಲಕ ಗಿಪ್ಟ್ ಬ್ಯಾಗ್ ವಿತರಿಸಿದ್ದು ವಿಶೇಷ ಗಮನ ಸೆಳೆಯಿತು. ಗಲ್ಫ್ ಯೂತ್ಸ್ ವಾಟ್ಸಾಪ್ ಗ್ರೂಪ್ ಅಡ್ಮಿನ್ಗಳಾದ ಅಶ್ರಫ್ ಯುನೈನ್ ಹಾಗೂ ಶಮೀರ್ ಕರ್ನಾಟಕ ಅವರು ಸಂಸ್ಥೆಗೆ ಸಲ್ಲಿಸಿದ ನಿರಂತರ ಸುದೀರ್ಘ ವಿಶಿಷ್ಟ ಸೇವೆಗಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಹ್ಮದ್ ಶಾಮಿಲ್ ಕಿರಾತ್ ಪಠಿಸಿದರು. ಸಿದ್ದಿಕ್ ಎಚ್ಕೆಬಿಕೆ ಸ್ವಾಗತಿಸಿದರು. ಫಾರೂಕ್ ತವಕ್ಕಲ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಕಬಕ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಸಿತಾರ್ ಇಬ್ರಾಹಿಂ, ಉಪಾದ್ಯಕ್ಷ ಉಮ್ಮರ್ ಕರಾವಳಿ, ಗಲ್ಫ್ ಯೂತ್ಸ್ ಗೌರವಾಧ್ಯಕ್ಷ ಮೊಹಮ್ಮದ್ ಬೊಳುವಾರು, ಹಿರಿಯ ಸದಸ್ಯ ಉಸ್ಮಾನ್ ಮಸ್ಕತ್, ಸದಸ್ಯರುಗಳಾದ ಇಸ್ಮಾಯಿಲ್ ಪೋಳ್ಯ, ರಫೀಕ್ ಪೋಳ್ಯ, ಹಸನ್ ದಾರಿಮಿ ಉಪಸ್ಥಿತರಿದ್ದರು. ಗಲ್ಫ್ ಯೂತ್ಸ್ ಲೋಕಲ್ ಕಮಿಟಿಯ ಬಹುತೇಕ ಸದಸ್ಯರು ಹಾಗೂ ಪ್ರಸ್ತುತ ರಜೆಯ ಮೇಲೆ ಊರಲ್ಲಿರುವ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಸಹಕರಿಸಿದರು.