ಇಂದು ದಾಖಲೆಯ 16ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 7) 2025-26ನೇ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದು ಯಾವ ಹೊಸ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಬೆಳಿಗ್ಗೆ 10:15ಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದು, ಕೃಷಿ, ಶಿಕ್ಷಣ, ಆರೋಗ್ಯ, ಸೇರಿದಂತೆ ಎಲ್ಲಾ ವಲಯಗಳಿಗೂ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ನೀರಿಕ್ಷೆಯಿದೆ. ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡದವರ ಸಬಲೀಕರಣದ ಹೊಸ ಕಾರ್ಯಕ್ರಮಗಳು ನಾಳೆ ಬಜೆಟ್‌ನಲ್ಲಿ ಘೋಷಣೆ ಆಗುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಶುಕ್ರವಾರ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಗೆ ಸಿದ್ದರಾಗಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ಬಜೆಟ್ ಮಂಡನೆ ದಾಖಲೆಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಹಣಕಾಸು ಸಚಿವರಾಗಿದ್ದಾಗ 1995-96ರಲ್ಲಿ ಮೊದಲ ಮುಂಗಡ ಪತ್ರ ಮಂಡನೆ ಮಾಡಿದ್ದರು.
ಪುತ್ತೂರಿಗೆ ಸಿಗುತ್ತಾ ಮೆಡಿಕಲ್ ಕಾಲೇಜು?: ಇಂದಿನ ಬಜೆಟ್ ನಲ್ಲಿ ದಕ ಜಿಲ್ಲೆಯ ಪುತ್ತೂರಿಗೆ ಮೆಡಿಕಲ್ ಕಾಲೇಜು ಘೋಷಣೆ ಆಗುತ್ತಾ ಎನ್ನುವ ಕುತೂಹಲ ಗರಿಗೆದರಿದೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿದ್ದು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾದ ಬಳಿಕ ಪುತ್ತೂರಿಗೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ ಎಂದು ಚಾಲೆಂಜ್ ಮಾಡಿ ಪ್ರಯತ್ನಿಸುತ್ತಿದ್ದಾರೆ. ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಸತತ ಒತ್ತಡ ಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಈತನ್ಮಧ್ಯೆ ಪುತ್ತೂರು ವಿಧಾನಸಭಾ ಕ್ಷೇತ್ರದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದು ಮೆಡಿಕಲ್ ಕಾಲೇಜು ಘೋಷಣೆಯಾದರೆ ಸಿಎಂ, ಡಿಸಿಎಂ ಹಾಗೂ ಶಾಸಕ ಅಶೋಕ್ ರೈ ಅವರನ್ನು ಅಭಿನಂದಿಸಲಿದ್ದಾರೆ, ಮೆಡಿಕಲ್ ಕಾಲೇಜು ಘೋಷಣೆ ಆಗದೇ ಇದ್ದರೆ ಸಿಎಂ ಸಿದ್ದರಾಮಯ್ಯ ಬಳಿ ಕಾರ್ಯಕರ್ತರು ಹಕ್ಕೊತಾಯ ಮಂಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.