ಸಿಲಿಂಡರ್ ಸ್ಫೋಟ: ಇನ್ನೋರ್ವ ಅಯ್ಯಪ್ಪ ವ್ರತಧಾರಿ ಸಾವು, ಐವರ ಸ್ಥಿತಿ ಗಂಭೀರ
ಹುಬ್ಬಳ್ಳಿ: ದೇವಸ್ಥಾನವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದ ಶಬರಿಮಲೆ ವ್ರತಧಾರಿಗಳ ಪೈಕಿ ಇನ್ನೋರ್ವ ಕೊನೆಯುಸಿರೆಳೆಯುವುದರೊಂದಿಗೆ ಈ ದುರ್ಘಟನೆಯಲ್ಲಿ ಸಾವಿಗೀಡಾದ ವ್ರತಧಾರಿಗಳ ಸಂಖ್ಯೆ ನಾಲ್ಕಕ್ಕೇರಿದೆ. ಚಿಕಿತ್ಸೆಗೆ ಸ್ಪಂದಿಸದೆ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾರೆ.

ಮೃತ ಯುವಕನನ್ನು ಲಿಂಗರಾಜ ಬೀರನೂರ (19) ಎಂದು ಗುರುತಿಸಲಾಗಿದೆ. ಡಿ.22ರಂದು ರಾತ್ರಿ ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೊನಿಯಲ್ಲಿರುವ ದೇವಸ್ಥಾನವೊಂದರಲ್ಲಿ ಸಿಲಿಂಡರ್ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಂಭೀರಗೊಂಡಿದ್ದರು. ಇವರ ಪೈಕಿ ಈಗಾಗಲೇ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ಐವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳು ದೇಗುಲದಲ್ಲಿ ರಾತ್ರಿ ಮಲಗಿದ್ದಾಗ ಸಿಲಿಂಡರ್ ಸ್ಫೋಟಗೊಂಡಿತ್ತು. ಗ್ಯಾಸ್ ಸೋರಿಕೆಯಾಗಿ ದೀಪದ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಈ ವೇಳೆ 9 ಮಂದಿ ಗಂಭೀರ ಗಾಯಗೊಂಡಿದ್ದರು. ಅವರನ್ನೆಲ್ಲ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಸಚಿವ ಸಂತೋಷ್ ಲಾಡ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಕೂಡ ಕಿಮ್ಸ್ ನಿರ್ದೇಶಕರಿಂದ ಮಾಲಾಧಾರಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.