ಬಸ್-ಕಾರು ಮಧ್ಯೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಡಿ.15ರಂದು ಮುಂಜಾನೆ ಶಬರಿಮಲೆ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈಪುನಲೂರು-ಮುವಾಟ್ಟುಪುಳ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು ತೆಲಂಗಾಣದಿಂದ ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೋಯ್ಯುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದಿದೆ.
ಕಳೆದ ತಿಂಗಳು ವಿವಾಹವಾಗಿದ್ದ ಅನು ಮತ್ತು ನಿಖಿಲ್ ಹನಿಮೂನ್ ಗೆ ಮಲೇಷ್ಯಾಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಮನೆಯಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ದಂಪತಿಗಳು ನವೆಂಬರ್ 30ರಂದು ವಿವಾಹವಾಗಿದ್ದರು. ಅಪಘಾತದಲ್ಲಿ ನಿಖಿಲ್ ಅವರ ತಂದೆ ಮಥಾಯ್ ಈಪೆನ್ ಮತ್ತು ಅನು ಅವರ ತಂದೆ ಬಿಜು ಪಿ ಜಾರ್ಜ್ ಕೂಡ ಸಾವನ್ನಪ್ಪಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಆಂಧ್ರಪ್ರದೇಶದಿಂದ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.