ಮತ್ತೆ ವಾಕಿಂಗ್ ಹೊರಟ ಒಂಟಿ ಸಲಗ..!? ಕೆಯ್ಯೂರು ದೇರ್ಲದಲ್ಲಿ ಕಾಡಾನೆಯ ಉಪಟಳ
ಪುತ್ತೂರು: ಕೆಲ ತಿಂಗಳುಗಳ ಹಿಂದೆ ಭಾರಿ ಸದ್ದು ಮಾಡಿದ ಒಂಟಿ ಸಲಗವೊಂದು ಮತ್ತೆ ವಾಕಿಂಗ್ ಹೊರಟಿದೆ. ಕೇರಳ ಭಾಗದಿಂದ ಕರ್ನಾಟಕಕ್ಕೆ ಬಂದಿದೆ ಎನ್ನಲಾದ ಕಾಡಾನೆಯೊಂದು ಕೆಯ್ಯೂರು ಗ್ರಾಮದ ದೇರ್ಲದಲ್ಲಿ ಡಿ.3 ರಂದು ರಾತ್ರಿ ಕಾಣಿಸಿಕೊಂಡಿದೆ. ಅರಿಯಡ್ಕ ಗ್ರಾಮದ ಚಾಕೋಟೆ ಭಾಗದಲ್ಲಿ ಕೃಷಿ ಹಾನಿ ಮಾಡಿದ್ದ ಆನೆ ಅಲ್ಲಿಂದ ನೇರವಾಗಿ ದೇರ್ಲದ ಕಡೆಗೆ ಹೆಜ್ಜೆ ಹಾಕಿದೆ. ದೇರ್ಲದ ಗೋಪಾಲಕೃಷ್ಣ ಭಟ್ ಎಂಬವರ ತೋಟಕ್ಕೆ ಲಗ್ಗೆ ಇಟ್ಟಿದ ಆನೆಯು ತೆಂಗಿನ ಗಿಡಗಳನ್ನು ಸೇರಿದಂತೆ ಕೃಷಿ ಹಾನಿ ಮಾಡಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.
ಮಾಡೂರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿರುವ ರಬ್ಬರ್ ನಿಗಮಕ್ಕೆ ಸೇರಿದ ಶೆಡ್ ಗೆ ನುಗ್ಗಿದ ಕಾಡಾನೆ ರಬ್ಬರ್ ಟಾಪಿಂಗ್ ಗೆ ಬಳಸುವ ಪಾತ್ರೆಗಳಿಗೆ ಹಾನಿಮಾಡಿದೆ. ಇದಲ್ಲದೆ ಅಮ್ಮಿನಡ್ಕ, ಮಳಿ, ಅಂಕೊತ್ತಿಮಾರ್, ನೂಜಿಬೈಲು, ಕನಕಮಜಲು, ದೇಲಂಪಾಡಿ ಮತ್ತು ಪೆರ್ಲಂಪಾಡಿ ಆಸುಪಾಸಿನಲ್ಲಿ ಹಾಗೆ ಕಾವು ಚಾಕೋಟೆಯಲ್ಲಿ ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ. ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿ
ಕಾಡಾನೆ ಇರುವ ಪ್ರದೇಶಗಳಿಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ. ಜೀಪ್ ನಲ್ಲಿ ಸೈರನ್ ಮೊಳಗಿಸಿ , ಅನೌನ್ಸ್ ಮಾಡುವ ಮೂಲಕ ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ್ದಾರೆ.