ನ.29: ಸುಳ್ಯದ ಅನಿವಾಸಿ ಭಾರತೀಯರ ಕನಸಿನ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಲೋಕಾರ್ಪಣೆ
ಸುಳ್ಯದ ಜಟ್ಟಿಪಳ್ಳ, ಗಾಂಧಿನಗರ, ನಾವೂರು ಮುಂತಾದ ಪರಿಸರಗಳ ಅನಿವಾಸಿ ಭಾರತೀಯರ ದೊಡ್ಡ ಕನಸಿನ ಕೂಸಾದ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನವಂಬರ್ 29ರಂದು ಲೋಕಾರ್ಪಣೆಗೊಳ್ಳಲಿದೆ. ಸುಳ್ಯದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಸಮೀಪ ನೂತನವಾಗಿ ನಿರ್ಮಾಣವಾದ ಅತ್ಯಾಧುನಿಕ ಹಾಗೂ ಸುಸಜ್ಜಿತ ಸಭಾಂಗಣ ‘ಗಲ್ಫ್ ಅಡಿಟೋರಿಯಂ ಎಂಬ ಹೆಸರಿನಲ್ಲಿ ಉದ್ಘಾಟನೆಗೊಳ್ಳಲಿದೆ.
ಗಲ್ಫ್ ರಾಜ್ಯಗಳಲ್ಲಿ ದುಡಿಯುತ್ತಿರುವ ಸುಳ್ಯ ತಾಲೂಕಿನ ಅನಿವಾಸಿ ಭಾರತೀಯರ ಸಂಘಟನೆ ಅನ್ಸಾರಿಯಾ ಗಲ್ಫ್ ಸೆಂಟ್ರಲ್ ಕಮಿಟಿಯು ಅನ್ಸಾರಿಯಾ ಅಡಿಟೋರಿಯ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಸುಮಾರು 2.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅಡಿಟೋರಿಯಂ ನಿರ್ಮಾಣ ಮಾಡಲಾಗಿದ್ದು ಮದುವೆ ಮತ್ತಿತರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಅಡಿಟೋರಿಯಂ ನಿರ್ಮಾಣಗೊಂಡಿದ್ದು ನ.29ರಂದು ಬೆಳಿಗ್ಗೆ ಗಂಟೆ 9ಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬದುರುಸ್ಸಾದಾತ್ ಅಸ್ಸಯ್ಯದ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಅವರ ದಿವ್ಯ ಹಸ್ತದಲ್ಲಿ ಅಡಿಟೋರಿಯಂ ಲೋಕಾರ್ಪಣೆಗೊಳ್ಳಲಿದೆ.
ದುಗ್ಗಲಡ್ಕ ಬುಖಾರಿಯಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 6 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರಂಭವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ.
ಬಳಿಕ ನಡೆಯುವ ಪ್ರಾರ್ಥನಾ ಸಂಗಮದ ನೇತೃತ್ವವನ್ನು ಕ್ಯಾಲಿಕಟ್ ಜಾಮಿಯಾ ಮರ್ಕಝ್ ನ ಉಪಾಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ಅಲ್ ಅಹದಲ್ ತಂಙಳ್ ಮುತ್ತನೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸಯ್ಯದ್ ಅಬ್ದುರ್ರಹ್ಮಾನ್ ಮಶ್ ಹೂದ್ ಅಲ್ ಬುಖಾರಿ ತಂಙಳ್ ಕೂರ ವಹಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ, ವಕ್ಸ್ ಸಚಿವ ಬಿ.ಝಡ್ ಝಮೀರ್ ಆಹಮ್ಮದ್ ಖಾನ್, ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ದ.ಕ.ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಒಳಗೊಳ್ಳುವ ವಿಶಾಲವಾದ ಆಡಿಟೋರಿಯಂ ಇದಾಗಿದ್ದು ವಿಶಾಲವಾದ ಡೈನಿಂಗ್ ಹಾಲ್, ಮಧುವೆ ಸಂದರ್ಭದಲ್ಲಿ ವರ ಹಾಗೂ ವದುವಿನ ಸಿದ್ಧತೆಗಾಗಿ ಪ್ರತ್ಯೇಕ ಕೊಠಡಿಗಳು, ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ, ಅತ್ಯಾಧುನಿಕ ವ್ಯವಸ್ಥೆ ಹಾಗೂ ವಿನ್ಯಾಸ ಒಳಗೊಂಡ ಅನ್ಸಾರಿಯಾ ಗಲ್ಫ್ ಅಡಿಟೋರಿಯಂನಲ್ಲಿ ಒಳಗೊಂಡಿದೆ.
ಅದೇ ದಿನ ಮಧ್ಯಾಹ್ನ ಬಳಿಕ 3ರಿಂದ ಗಲ್ಫ್ ಮೀಟ್ ಕಾರ್ಯಕ್ರಮ ನಡೆಯಲಿದ್ದು ಈ ಭವನದ ನಿರ್ಮಾಣಕ್ಕೆ ಹಗಲಿರುಳು ದುಡಿದ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಸುಳ್ಯ ತಾಲೂಕಿನ ಹಲವು ಮುಖಂಡರುಗಳು ಭಾಗವಹಿಸಲಿದ್ದಾರೆ.