ಉಡುಪಿ: ಮನೆಗೆ ನುಗ್ಗಿ ತಾಯಿ ಹಸೀನಾ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು
ಉಡುಪಿ: ನೇಜಾರುವಿನ ತೃಪ್ತಿ ನಗರದಲ್ಲಿ ನಡೆದ ಮುಸ್ಲಿಂ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗಳಿಸಿದ್ದಾರೆ ಎಂದು ತಿಳಿದು ಬಂದಿದೆ.
ತಾಯಿ ಹಸೀನಾ ಮತ್ತವರ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ. ಓರ್ವ ಮಹಿಳೆ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ತನಿಖೆ ಮಾಡಿ ಶೀಘ್ರ ಇದರ ಹಿಂದಿನ ಕಾರಣ ಪತ್ತೆ ಹಚ್ಚುತ್ತೇವೆ. ಮನೆಯೊಳಗೆ ಯಾವುದೇ ಸೊತ್ತುಗಳು ಕಳವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಕೊಲೆಗೆ ಏನು ಕಾರಣ ಎಂದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ” ಎಂದು ಉಡುಪಿ ಎಸ್ಪಿ ಡಾ.ಅರುಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಆರೋಪಿ ರಿಕ್ಷಾದಲ್ಲಿ ಬಂದಿರುವುದು ಸ್ಪಷ್ಟವಾಗಿದೆ. ಸಂತೆಕಟ್ಟೆ ಸ್ಟಾಂಡ್ ನ ರಿಕ್ಷಾ ಚಾಲಕರೋರ್ವರು ಈ ಬಗ್ಗೆ ಹೇಳಿಕೆ ನೀಡಿದ್ದಾರ.
ಆರೋಪಿ ಬೆಂಗಳೂರು ಭಾಗದ ಶೈಲಿಯ ಕನ್ನಡ ಮಾತನಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿದ್ದು, ‘ಘಟನೆಯ ಬಗ್ಗೆ ಪೊಲೀಸರ ಜೊತೆ ಮಾತನಾಡಿದ್ದೇನೆ. ಉಡುಪಿ ಎಸ್ಪಿ ಡಾ. ಅರುಣ್ ಈಗಾಗಲೇ ತಂಡವನ್ನು ರಚನೆ ಮಾಡಿದ್ದಾರೆ. ದೀಪಾವಳಿ ಈ ಸಂದರ್ಭದಲ್ಲಿ ಘಟನೆ ಎಲ್ಲರ ದುಃಖಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಹತ್ಯೆಗೀಡಾದ ಯುವತಿ ಅಫ್ನಾನ್(23. ವ) ಬೆಂಗಳೂರು ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿಯಷ್ಟೇ ರಜೆಯಲ್ಲಿ ಉಡುಪಿಗೆ ಬಂದಿದ್ದರು ಎನ್ನಲಾಗಿದೆ. ಮನೆಯ ಯಜಮಾನ ನೂರ್ ಮಹಮ್ಮದ್ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಹಸೀನಾ(46. ವ)ಗೃಹಿಣಿಯಾಗಿದ್ದರು. ಅಯ್ನಾಝ್(21. ವ) ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಆಸಿಂ(12.ವ) ಉಡುಪಿಯಲ್ಲಿ 8ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿ ಹಸೀನಾ, ಅಫ್ನಾನ್,ಅಯ್ನಾಝ್ ಗೆ ಮೊದಲು ಇರಿದಿದ್ದಾನೆ. ಬೊಬ್ಬೆ ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ಆತನನ್ನೂ ಇರಿದಿದ್ದಾನೆ. ಸ್ಥಳಕ್ಕೆ ಬಂದ ಪಕ್ಕದ ಮನೆ ಯುವತಿಯನ್ನೂ ಬೆದರಿಸಿದ ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಅತ್ತೆಗೂ ತೀವ್ರ ತರದ ಗಾಯವಾಗಿದ್ದು ಅವರು ಬಾತ್ ರೂಂ ಒಳಗೆ ಹೋಗಿ ಬಾಗಿಲು ಹಾಕಿದ್ದು ಅವರಿಗೆ ತೀವ್ರ ತರದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.