ಕಟ್ಟತ್ತಾರು: ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದ ಸ್ಥಳಕ್ಕೆ ಅಧಿಕಾರಿಗಳ ಭೇಟಿ; ಮಾತುಕತೆ- ಬಹಿಷ್ಕಾರ ಹಿಂತೆಗೆತ
ಪುತ್ತೂರು: ಕಳೆದ 15 ವರ್ಷಗಳಿಂದ ರಸ್ತೆ ಕಾಂಕ್ರಿಟೀಕರಣಕ್ಕೆ ಮನವಿ ಮಾಡುತ್ತಿದ್ದರೂ ನಮ್ಮ ರಸ್ತೆಗೆ ಅನುದಾನ ಬಿಡುಗಡೆ ಮಾಡದೇ ಇರುವುದನ್ನು ಖಂಡಿಸಿ ಕೆದಂಬಾಡಿ ಗ್ರಾಮದ ಕಟ್ಟತ್ತಾರು-ನಿಡ್ಯಾಣ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುವುದಾಗಿ ಬ್ಯಾನರ್ ಹಾಕಿದ್ದು ಆ ಪ್ರದೇಶಕ್ಕೆ
ಮಾ.17ರಂದು ಸಂಜೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ನ್ನು ತೆರವುಗೋಳಿಸಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವೊಲಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಶರತ್ ಕುಮಾರ್ ಭರವಸೆ: ನಂತರ ಕೆಯ್ಯೂರು ಗ್ರಾ. ಪಂ ಸದಸ್ಯರು, ಬಿಜೆಪಿ ಮುಖಂಡರು ಆದ ಶರತ್ ಮಾಡಾವು ಅವರು ಸ್ಥಳೀಯರ ಜೊತೆ ಮಾತನಾಡಿ ‘ಮುಂದಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ನಾನೇ ಮುಂದೆ ನಿಂತು ನಿಮ್ಮ ರಸ್ತೆಯ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಅಶೋಕ್ ರೈ ಭರವಸೆ ನೀಡಿದ್ದರು:
ಕಾಂಗ್ರೆಸ್ ಮುಖಂಡ ಕೋಡಿಂಬಾಡಿ ಅಶೋಕ್ ರೈಯವರು ಮಾ.1ರಂದು ಸಂಜೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದರು.
ಆ ಸಂದರ್ಭದಲ್ಲಿ ಅಶೋಕ್ ರೈಯವರು ಸ್ಥಳೀಯರ ಅಹವಾಲು ಕೇಳಿದ ಬಳಿಕ ‘ಮುಂದಿನ ಬಾರಿ ನಮ್ಮನ್ನು ಬೆಂಬಲಿಸಿ, ಕಾಂಗ್ರೆಸ್ ಶಾಸಕರು ಆಯ್ಕೆಯಾದರೆ ಮೂರೇ ತಿಂಗಳೊಳಗೆ ನಿಮ್ಮ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವ ಕೆಲಸವನ್ನು ಮಾಡುತ್ತೇವೆ. ಕಾಂಗ್ರೆಸ್ನಲ್ಲಿ ಯಾರೇ ಅಭ್ಯರ್ಥಿಯಾಗಿ ಶಾಸಕರಾದರೂ ನಾನೇ ಮುಂದೆ ನಿಂತು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ. ಚುನಾವಣೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದರು.