ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಮಾಹಿತಿ ನೀಡುವವರಿಗೆ ನಗದು ಬಹುಮಾನ ಘೋಷಣೆ ಮಾಡಿದ NIA
ಬೆಂಗಳೂರು: ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ರಾಷ್ಟ್ರೀಯ ತನಿಖಾ ದಳ(NIA) ನಗದು ಬಹುಮಾನ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.
ಕೊಲೆ ಪ್ರಕರಣದ ಆರೋಪಿಗಳಾದ ಬೆಳ್ಳಾರೆ ಗ್ರಾಮದ ಮುಹಮ್ಮದ್ ಮುಸ್ತಫ ಎಸ್. ಹಾಗೂ ಮಡಿಕೇರಿಯ ಗದ್ದಿಗೆ ನಿವಾಸಿ ತುಫೈಲ್ ಎಂ.ಎಚ್. ಬಗ್ಗೆ ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂ. ನಗದು ಘೋಷಣೆ ಮಾಡಿದೆ. ಅದೇ ರೀತಿ, ಸುಳ್ಯದ ಕಲ್ಲುಮುಟ್ಲು ಮನೆ ನಿವಾಸಿ ಉಮರ್ ಫಾರೂಕ್ ಎಂ.ಆರ್. ಮತ್ತು ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದೀಕ್ ಎಂಬವರ ಬಗ್ಗೆ ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ನಗದು ಬಹುಮಾನ ನಿಗದಿಪಡಿಸಲಾಗಿದೆ.
ಈ ನಾಲ್ವರು ಆರೋಪಿಗಳು ಪಿಎಫ್ ಐ ಸಂಘಟನೆಯ ಸದಸ್ಯರು ಎಂದು ಎನ್ಐಎ ತಿಳಿಸಿದ್ದು, ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಬೆಂಗಳೂರಿನ ದೊಲ್ಮೂರಿನ ಶ್ರೀ ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಭವನದಲ್ಲಿರುವ ಎನ್ ಐಎ ಕಚೇರಿ ಅಥವಾ ದೂರವಾಣಿ ಸಂಖ್ಯೆ 080-29510900, ಮೊ.ಸಂ. 8904241100 ಅಥವಾ ಇ ಮೇಲ್: info.blr.nia@gov.inಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಎನ್ಐಎ ಪ್ರಕಟನೆಯಲ್ಲಿ ತಿಳಿಸಿದೆ.